ಬ್ರಹ್ಮಾವರ: ಸಿಡಿಲು‌ ಬಡಿದು ಮನೆಗೆ ಹಾನಿ; ಮಹಿಳೆಗೆ ಗಾಯ

ಉಡುಪಿ: ಬ್ರಹ್ಮಾವರ ತಾಲೂಕಿನ ನೈಲಾಡಿ ಬೂದಾಡಿ ಮನೆಯೊಂದರ ಮೇಲೆ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಸಿಡಿಲು ಅಪ್ಪಳಿಸಿದ್ದು, ಇದರ ಪರಿಣಾಮ ಮನೆಯ ಮೇಲ್ಛಾವಣಿ, ವಿದ್ಯುತ್ ತಂತಿ ಸುಟ್ಟು, ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.
ಬೂದಾಡಿ ಮನೆಯ ನಾಗರತ್ನ ಭುಜಂಗ ಶೆಟ್ಟಿ ಅವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ.‌ನಷ್ಟ ಉಂಟಾಗಿದೆ‌.

ಮನೆಯಲ್ಲಿ ಎರಡು ಸಣ್ಣ ಮಕ್ಕಳು ಸಹಿತ ಆರು ಮಂದಿ ಮಲಗಿದ್ದು, ಮಹಿಳೆಯೊಬ್ಬರಿಗೆ ವಿದ್ಯುತ್ ಕಿಡಿ ಬಿದ್ದು ಸಣ್ಣ ಗಾಯವಾಗಿದೆ. ಉಳಿದಂತೆ ಯಾರಿಗೂ ಹಾನಿಯಾಗಿಲ್ಲ. ಮನೆ ಸಮೀಪದ ಹಾಡಿಯಲ್ಲಿದ್ದ ಹುತ್ತದ ಮೇಲೆ ಸಿಡಿಲು ಅಪ್ಪಳಿಸಿದೆ. ಬಳಿಕ ಅಲ್ಲೇ ಸಮೀಪದ ಕಬ್ಬಿಣ ಬೇಲಿಗೆ ಸಿಡಿಲು ತಗ್ಗಲಿದೆ. ಹುತ್ತ ಎರಡು ಭಾಗವಾಗಿ, ಮಣ್ಣು ಚದುರಿ ಹೋಗಿದೆ.

ಕಬ್ಬಿಣದ ಬೇಲಿ ಮೂಲಕ ಸಿಡಿಲಿನ ಅಬ್ಬರ ಮನೆಯಂಗಳಕ್ಕೆ ಪ್ರಸರಿಸಿದೆ. ಆ ಕಬ್ಬಿಣದ ಬೇಲಿಗೆ ತಾಗಿಕೊಂಡಿರುವ ಮರವೊಂದಕ್ಕೆ ಕಬ್ಬಿಣ ತಂತಿ ಕಟ್ಟಿದ್ದು, ಅಲ್ಲಿಂದ ನೇರವಾಗಿ ಮನೆಯ ವಿದ್ಯುತ್ ತಂತಿಗೆ ತಗ್ಗಲಿದೆ. ಮನೆಯ ಇಡೀ ವೈಯರಿಂಗ್ ಸುಟ್ಟು ಹೋಗಿದೆ. ಮಹಡಿಯ ಮೇಲ್ಛಾವಣಿ ಒಡೆದು ಹೋಗಿದೆ.