ಉಡುಪಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ತಿಂಗಳ ಗರ್ಭಿಣಿ ದನವನ್ನು ಗೋಕಳ್ಳರು ಕದ್ದೊಯ್ದ ಘಟನೆ ಕೋಟ ಸಮೀಪದ ಗುಳ್ಳಾಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಗುಳ್ಳಾಡಿ ಗ್ರಾಮದ ಮಂಜಿ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನದ ಹಗ್ಗವನ್ನು ಕತ್ತರಿಸಿಕೊಂಡು ಕಳವು ಮಾಡಲಾಗಿದೆ. ಮಂಜಿ ತೀರ ಬಡವರಾಗಿದ್ದು, ಸೊಸೆ ಹಾಗೂ ಮೊಮ್ಮಗಳೊಂದಿಗೆ ವಾಸವಿರುವ ಅವರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದರು. ಇದೀಗ ಇದ್ದ ಗೋವನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಈ ಬಗ್ಗೆ ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋ ಕಳ್ಳರ ಶೀಘ್ರ ಬಂಧನಕ್ಕೆ ಆಗ್ರಹ:
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಕವೂ ಗೋ ಕಳ್ಳತನ ನಡೆಯುತ್ತಿದೆ. ಗೋ ಕಳ್ಳರು ಯಾವುದೇ ಕಾನೂನಿನ ಭಯ ಇಲ್ಲದೆ ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪ್ರಕರಣ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕುಂದಾಪುರ ಬಿಜೆಪಿ ಯುವಮೋರ್ಚಾ ಆಗ್ರಹಿಸಿದೆ.