ಉಡುಪಿ ನಗರಸಭೆಯ ಪೌರಕಾರ್ಮಿಕನಿಗೆ ಹಲ್ಲೆ: ಇಬ್ಬರ ಬಂಧನ

ಉಡುಪಿ: ಕಸದ ವಿಚಾರಕ್ಕೆ ಸಂಬಂಧಿಸಿ ನಗರಸಭೆಯ ಕಸ ಸಂಗ್ರಹ ಮಾಡುವ ಕಾರ್ಮಿಕರೊಬ್ಬರಿಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಇಲೆಕ್ಟ್ರಾನಿಕ್ಸ್ ಅಂಗಡಿಯವರು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಗರದ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಹಲ್ಲೆಗೊಳಗಾದ ಕಾರ್ಮಿಕನನ್ನು ಬಾಗಲಕೋಟೆ ಮೂಲದ ನಿಟ್ಟೂರು ನಿವಾಸಿ ಸಂಜು ಮಾದರ್ (26) ಎಂದು ಗುರುತಿಸಲಾಗಿದೆ. ನೇಜಾರಿನ ಇಸ್ಮಾಯಿಲ್(55) ಹಾಗೂ ಹೂಡೆಯ ಸುಹೈಲ್ (28) ಎಂಬವರು ಹಲ್ಲೆ ನಡೆಸಿದ್ದು, ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ನೀಡುವಂತೆ ನಗರಸಭೆ ನಿಯಮ ಜಾರಿಗೊಳಿಸಿದೆ. ಅದರಂತೆ ಸಂಜು ಸಿಟಿ ಬಸ್ ನಿಲ್ದಾಣದ ಬಳಿ ಕಸ ಸಂಗ್ರಹಕ್ಕೆ ವಾಹನದೊಂದಿಗೆ ಹೋಗಿದ್ದು, ಅಲ್ಲಿ ಆರೋಪಿಗಳ ಅಂಗಡಿಯಲ್ಲಿ ಹಸಿ ಮತ್ತು ಒಣ ಕಸ ಬೆರೆಸಿರುವುದನ್ನು ಸಂಜು ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಅಂಗಡಿಯವರಿಗೆ ಮತ್ತು ಸಂಜು ಅವರ ಮಧ್ಯೆ ವಾಗ್ವಾದ ನಡೆಯಿತು.

ಇದೇ ಸಿಟ್ಟಿನಲ್ಲಿ ಇಸ್ಮಾಯಿಲ್ ಮತ್ತು ಸುಹೈಲ್, ಸಂಜುವಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಅಲ್ಲದೆ ನಾವು ಯಾರಂತ ಗೊತ್ತುಂಟಾ, ನಮ್ಮ‌ ವಿಷಯಕ್ಕೆ ಬರಬೇಡ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.