ಉಡುಪಿ: ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಎಂಬವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಿಂಡಿಕೇಟ್ ಬ್ಯಾಂಕ್ಗೆ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದಿದ್ದಾರೆ. ಇದರಲ್ಲಿ ಬ್ಯಾಂಕ್ ಸಿಬ್ಬಂದಿ ಕೂಡ ಶಾಮೀಲಾಗಿದ್ದರೆ ಎಂದು ಆರೋಪಿಸಿ ಕೆಲವು ದಾಖಲೆಗಳನ್ನು ಕೋರಿ ಸಿಂಡಿಕೇಟ್ ಬ್ಯಾಂಕಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ(ಸಿಪಿಐಓ) ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಶೀಲಿಸಿದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಬರುವುದಿಲ್ಲ ಎಂಬುದಾಗಿ ತಿಳಿಸಿ ಖಾಸಗಿ ಮಾಹಿತಿಯನ್ನು ಕೇಳಿರುವುದರಿಂದ ದೂರು ಅರ್ಜಿಯನ್ನು ವಜಾಗೊಳಿಸಿದ್ದರು.
ಮಾಹಿತಿ ಹಕ್ಕು ಅರ್ಜಿ ವಜಾಗೊಳಿಸಿರುವುದನ್ನು ಪ್ರಶ್ನಿಸಿ, ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ ಅಬ್ರಾಹಂ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲದಿರುವುದರಿಂದ ಸಂಪೂರ್ಣ ಮಾಹಿತಿ ನೀಡುವಂತೆ ಮತ್ತು ಕ್ರಮಕೈಗೊಳ್ಳುವಂತೆ ಮೇಲ್ಮನವಿ ಸಲ್ಲಿಸಿದ್ದರು.
ದೂರುದಾರರ ಅರ್ಜಿಯನ್ನು ಪರೀಶೀಲಿಸಿದ ಮೇಲ್ಮನವಿ ಪ್ರಾಧಿಕಾರವು ಕೇಂದ್ರ ಮಾಹಿತಿ ಅಧಿಕಾರಿ ನೀಡಿರುವ ಆದೇಶವು ಸರಿಯಾಗಿದೆ. ಬ್ಯಾಂಕಿನವರು ಈಗಾಗಲೇ ನೀಡಿದ ಮಾಹಿತಿಯಲ್ಲದೆ, ಇತರ ಖಾಸಗಿ ಮಾಹಿತಿ ನೀಡಲು ಅವಕಾಶವಿಲ್ಲ ಎನ್ನುವುದನ್ನು ಎತ್ತಿಹಿಡಿದಿದ್ದರು.
ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿಗೆ ಸೋಲಾದ ಬಳಿಕವೂ ದೂರುದಾರರು ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ದಾಖಲಿಸಿದ್ದರು. ಕೇಂದ್ರ ಮಾಹಿತಿ ಆಯೋಗವು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿ ದೂರುದಾರರು ಮತ್ತು ಮಾಹಿತಿ ಅಧಿಕಾರಿಗಳಿಂದ ಹೆಚ್ಚುವರಿ ವಿವರ ಪಡೆಯಿತು.
ಪ್ರಮೋದ್ ಮಧ್ವರಾಜ್ ಅವರು ಬ್ಯಾಂಕಿನ ಪ್ರತಿಷ್ಟಿತ ಗ್ರಾಹಕರಾಗಿದ್ದು, ಸಾಲ ಮಂಜೂರಾತಿ ನೀಡುವ ಸಂದರ್ಭದಲ್ಲಿ ಬ್ಯಾಂಕಿನ ಕಾನೂನು ಹಾಗೂ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆ ಎಂದು ಅಧಿಕಾರಿಗಳು ಬ್ಯಾಂಕಿನ ಪರವಾಗಿ ಆಯೋಗಕ್ಕೆ ಮಾಹಿತಿ ನೀಡಿದರು.
ವಿಷಯ ಪರಾಮರ್ಷೆ ನಡೆಸಿದ ಮಾಹಿತಿ ಆಯೋಗವು ಅಬ್ರಾಹಂ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ದೂರುದಾರರು ನೀಡಿರುವ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಾಗಿರದೆ ಖಾಸಗಿ ಮಾಹಿತಿ ಕೇಳಿದ್ದಾರೆ. ಖಾಸಗಿ ಮಾಹಿತಿ ಬಹಿರಂಗಪಡಿಸಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿತು. ಈ ಹಿಂದೆ ನೀಡಲಾಗಿರುವ ಎರಡೂ ಆದೇಶಗಳನ್ನು ಎತ್ತಿಹಿಡಿದ ದೆಹಲಿಯ ಕೇಂದ್ರ ಮಾಹಿತಿ ಆಯೋಗವು ಟಿ. ಜೆ ಅಬ್ರಾಹಂ ನೀಡಿದ ಅರ್ಜಿಯನ್ನು ವಜಾಗೊಳಿಸಿತು.