ಉಡುಪಿ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಹಕರಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಇಂದು ಉಡುಪಿ ಬಿಗ್ ಬಜಾರ್ ಮಳಿಗೆಯಲ್ಲಿ ‘ಅಭಾರ್ ಡೇ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉಡುಪಿ ಬಿಗ್ ಬಜಾರ್ ಮುಖ್ಯಸ್ಥ ರಾಘವೇಂದ್ರ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರು ಸಂಸ್ಥೆಗೆ ಉತ್ತಮ ರೀತಿಯಲ್ಲಿ ಸಹಕರಿಸಿದ್ದು, ಇದಕ್ಕೆ ಸಂಸ್ಥೆ ಅಭಾರಿಯಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕ್ಯೂನಲ್ಲಿ ನಿಂತುಕೊಂಡು ಅಗತ್ಯವಸ್ತುಗಳ ಖರೀದಿಸಿದ್ದಾರೆ. ಸೋಂಕು ಹರಡುವ ಭೀತಿಯ ಮಧ್ಯೆಯೂ ಸಂಸ್ಥೆಯ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಅಗತ್ಯವಸ್ತುಗಳನ್ನು ಗ್ರಾಹಕರು ಖರೀದಿಸಿದ್ದಾರೆ. ಇದಕ್ಕೆ ಸಂಸ್ಥೆ ಗ್ರಾಹಕರಿಗೆ ಅಭಾರಿಯಾಗಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಉಮೇಶ್ ಆಚಾರ್ಯ ಮಾತನಾಡಿ, ಉಡುಪಿ ಬಿಗ್ ಬಜಾರ್ ಕೇವಲ ವ್ಯವಹಾರಿಕ ಸಂಸ್ಥೆಯಾಗಿ ಗುರುತಿಸಿಕೊಂಡಿಲ್ಲ. ಅದು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ. ಉಡುಪಿಯ ಧಾರ್ಮಿಕ ಕಾರ್ಯಗಳಿಗೂ ತಮ್ಮ ಸಹಕಾರವನ್ನು ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಹಾಗೆ ಲಾಕ್ ಡೌನ್ ಸಂದರ್ಭದಲ್ಲಿ ಬಿಗ್ ಬಜಾರ್ ಗ್ರಾಹಕರಿಗೆ ನೀಡಿದ ಸೇವೆ ಶ್ಲಾಘನೀಯ ಎಂದರು.
ಕೊರೊನಾ ಎಂಬ ಮಹಾಮಾರಿಯ ಸೋಂಕಿನ ಭಯದ ವಾತಾವರಣದ ನಡುವೆಯೂ ಬಿಗ್ ಬಜಾರ್ ಆಡಳಿತ ವರ್ಗ ಹಾಗೂ ಸಿಬ್ಬಂದಿ ಗ್ರಾಹಕರ ಸೇವೆಯಲ್ಲಿ ನಿರತವಾಗಿತ್ತು. ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕಾರ್ಯದಲ್ಲಿ ತೊಡಗಿತ್ತು. ಸಂಸ್ಥೆಯ ಈ ಕಾರ್ಯವನ್ನು ನಮ್ಮಂತಹ ಗ್ರಹಿಣಿಯರು ಮರೆಯುವಂತಿಲ್ಲ. ಸಂಸ್ಥೆಯ ಕಾರ್ಯಕ್ಕೆ ಎಲ್ಲ ಗ್ರಾಹಕರು ಕೃತಜ್ಞರಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಸಿರಿ ತುಳುವ ಚಾವಡಿ ಒಡಿಪು ಇದರ ಅಧ್ಯಕ್ಷ ಈಶ್ವರ್ ಚಿಟ್ಪಾಡಿ ಮಾತನಾಡಿ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ ಬಿಗ್ ಬಜಾರ್ ಗ್ರಾಹಕರಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯ ಮಾಡಿದೆ. ಅತ್ಯಂತ ಸಂದಿಗ್ಧತೆಯ ಪರಿಸ್ಥಿತಿಯಲ್ಲೂ ಉಡುಪಿ ಬಿಗ್ ಬಜಾರ್ ಸಿಬ್ಬಂದಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ತಮ್ಮ ಸೇವಾ ಬದ್ಧತೆಯನ್ನು ಮೆರೆದಿದ್ದಾರೆ. ಹಾಗಾಗಿ ಗ್ರಾಹಕರು ಬಿಗ್ ಬಜಾರ್ ಗೆ ಅಭಾರಿಯಾಗಬೇಕಾಗಿದೆ ಎಂದು ಹೇಳಿದರು.
ಲಾಕ್ ಡೌನ್ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿಗೆ ಯಾವುದೇ ಹಣವನ್ನು ಪಡೆಯದೆ ಅಕ್ಕಿಯನ್ನು ನೀಡುವ ಮೂಲಕ ಅವರ ಹಸಿವನ್ನು ನೀಗಿಸುವ ಕಾರ್ಯ ಮಾಡಿದೆ. ಕೇವಲ ಲಾಭವನ್ನು ನೋಡದೆ, ಸಾಮಾಜಿಕವಾಗಿ ಬದ್ಧತೆಯನ್ನು ತೋರಿದೆ. ಆ ಮೂಲಕ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು.
ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆಯ ಹಿರಿಯ ಅಕೌಂಟೆಂಟ್ ಮುಕ್ತ ಕಾಮತ್ ಮಾತನಾಡಿ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ ಬಿಗ್ ಬಜಾರ್ ಜನರಿಗೆ ಮಾಡಿರುವ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಅಗತ್ಯ ವಸ್ತುಗಳನ್ನು ಹೋಮ್ ಡೆಲಿವೆರಿ ಮಾಡುವ ಮೂಲಕ ಅತ್ಯಂತ ಸಂಕಷ್ಟ ಕಾಲದಲ್ಲಿ ಗ್ರಾಹಕರಿಗೆ ಸಹಾಯ ಮಾಡಿದೆ. ನಾನು ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಆಗ ನಾನು ಎಲ್ಲಿಗೂ ಹೋಗುವಂತಿರಲಿಲ್ಲ. ಆಗ ನನ್ನ ಮನೆಗೆ ಬೇಕಾದ ಅಗತ್ಯವಸ್ತುಗಳನ್ನು ಮನೆಗೆ ತಲುಪಿಸುವ ನನ್ನ ಸಂಕಷ್ಟವನ್ನು ನೀಗಿಸಿದೆ. ಇದು ನನ್ನ ಒಬ್ಬಳ ಕಥೆಯಲ್ಲ. ಇಂತಹ ನೂರಾರು ಜನರಿಗೆ ಬಿಗ್ ಬಜಾರ್ ಅಗತ್ಯ ಸಾಮಗ್ರಿಗಳನ್ನು ಪೂರೈಸಿ, ಅವರ ಸಂಕಷ್ಟ ದೂರ ಮಾಡಿದೆ ಎಂದರು.