ಉಡುಪಿ: ಪಂಚಮಿ ಸೌಹಾರ್ದ ಸಹಕಾರಿಯ ಸುಸಜ್ಜಿತ ನೂತನ ಕಚೇರಿ ಉದ್ಘಾಟನೆ

ಉಡುಪಿ: ಉಡುಪಿ ಸಿಟಿ ಬಸ್‍ನಿಲ್ದಾಣ ಬಳಿಯ ಮಠದಬೆಟ್ಟು ರಸ್ತೆಯ ಆರ್ ಎಸ್‍ಬಿ ವಿಂಡ್ಸರ್ ನ ಪ್ರಥಮ ಮಹಡಿಯಲ್ಲಿ ಪಂಚಮಿ ಸೌಹಾರ್ದ ಸಹಕಾರಿಯ ಸುಸಜ್ಜಿತ ನೂತನ ಕಚೇರಿ ಸೋಮವಾರ ಉದ್ಘಾಟನೆಗೊಂಡಿತು.

ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅವರು, ಸಹಕಾರಿ ರಂಗವು ಜನಸ್ನೇಹಿ ಆಡಳಿತ ವ್ಯವಸ್ಥೆಯೊಂದಿಗೆ ಗ್ರಾಹಕರ ವಿಶ್ವಾಸ, ನಂಬಿಕೆಗೆ ಪಾತ್ರವಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿ ಸಮಾನವಾಗಿ ಗ್ರಾಹಕರಿಗೆ ಸೇವೆ ನೀಡುತ್ತಿವೆ ಎಂದು ಹೇಳಿದರು.

ನಾಲ್ಕೈದು ವರ್ಷಗಳ ಹಿಂದೆ ಸ್ಥಾಪನೆಯಾದರೂ ಬಹುಬೇಗವಾಗಿ ಗ್ರಾಹಕ ವಿಶ್ವಾಸಗಳಿಸುವಲ್ಲಿ ಪಂಚಮಿ ಸೌಹಾರ್ದ ಸಹಕಾರಿ ಯಶಸ್ವಿಯಾಗಿದೆ. ಇದೇ ರೀತಿಯ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂದು‌ ಶುಭಹಾರೈಸಿದರು.

ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಎಳ್ಳಾರೆ ಮಾತನಾಡಿ, ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿ ರಂಗ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.
ಮಣಿಪಾಲ ಆರ್.ಎಸ್.ಬಿ. ಸಂಘದ ಅಧ್ಯಕ್ಷ ಎಂ. ಗೋಕುಲದಾಸ್ ನಾಯಕ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕ ಎಸ್.ಕೆ. ಮಂಜುನಾಥ್, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಕಾಮತ್, ಗೀತಾಂಜಲಿ ಸಿಲ್ಕ್ಸ್ ಪಾಲುದಾರ ರಾಮಕೃಷ್ಣ ನಾಯಕ್, ಉದ್ಯಮಿ ವಾಸುದೇವ ನಾಯಕ್, ಸಂಕೀರ್ಣ ಮಾಲೀಕ ವಸಂತ ನಾಯಕ್, ಆದಿಶಕ್ತಿ ಮಹಾಲಕ್ಷ್ಮೀ ದೇವಳದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಮುಜೂರು, ಪಂಚಮಿ ಸೌಹಾರ್ದ ಸಹಕಾರಿ ಮುಖ್ಯ ಕಾರ್ಯನಿರ್ವಹಣಾಕಾರಿ ಸ್ವಾತಿ ಪ್ರಭು ಉಪಸ್ಥಿತರಿದ್ದರು.

ಪಂಚಮಿ ಸೌಹಾರ್ದ ಸಹಕಾರಿ ಅಧ್ಯಕ್ಷ ಸತ್ಯಪ್ರಸಾದ್ ಶೆಣೈ ಬ್ರಹ್ಮಾವರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪಂಚಮಿ ಸೌಹಾರ್ದ ಸಹಕಾರಿ ನಿರ್ದೇಶಕ ವಿಜಯ ಶೆಣೈ ವಂದಿಸಿದರು. ಶಿಕ್ಷಕ ಉಮೇಶ್ ನಾಯಕ್ ಪೆರ್ಣಂಕಿಲ ಕಾರ್ಯಕ್ರಮ ನಿರೂಪಿಸಿದರು.