ಉಡುಪಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಇದಕ್ಕೆ ಯಾರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು. ಮಹಾಜನ್ ವರದಿ ಅಂತಿಮ ಅಂಥಾ ಗೊತ್ತಿದ್ದರೂ ಸಹ ಇಂತಹ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಉಡುಪಿಯ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂಬ ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದರು.
ಕರ್ನಾಟಕದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದಾರೆ. ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಕನ್ನಡಿಗರು ಮರಾಠಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಸೌಹಾರ್ದಯುತವಾದ ವಾತಾವರಣವನ್ನು ಕೆಡಿಸುವ ಹಾಗೂ ಅಶಾಂತಿ ಮೂಡಿಸುವ ಕೆಲಸ ಉದ್ಧವ್ ಠಾಕ್ರೆಗೆ ಗೌರವ ತರುವ ಸಂಗತಿಯಲ್ಲ. ಇದನ್ನು ಖಂಡಿಸುತ್ತೇನೆ. ಕರ್ನಾಟಕ ರಾಜ್ಯದ ಒಂದಿಂಚು ಜಾಗವನ್ನು ಕೊಡುವ ಪ್ರಶ್ನೆ ಉದ್ಭವಾಗುವುದಿಲ್ಲ. ಇಂತಹ ಕೆಟ್ಟ ರಾಜಕಾರಣ ಮಾಡುವುದನ್ನು ಅವರು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸಹಜವಾಗಿಯೇ ಇಂತಹ ಹೇಳಿಕೆಗಳು ಕನ್ನಡಿಗರಲ್ಲಿ ನೋವು, ಆಕ್ರೋಶ ಉಂಟು ಮಾಡುತ್ತವೆ. ಇಂತಹ ರಾಜಕೀಯ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಕನ್ನಡ ಪರ ಸಂಘಟನೆಗಳಲ್ಲಿ ವಿನಂತಿ ಮಾಡುತ್ತೇನೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಸುನಿಲ್ ಕುಮಾರ್, ಸುಕುಮಾರ್ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ ಉಪಸ್ಥಿತರಿದ್ದರು.