ಕಾರ್ಕಳ: ಪರ್ಪಲೆಗಿರಿ ಅಷ್ಟಮಂಗಲ ಪ್ರಶ್ನಾಚಿಂತನೆ, ಜೀರ್ಣೋದ್ಧಾರ ಸಂಕಲ್ಪ ಸಭೆಗೆ ಚಾಲನೆ

ಉಡುಪಿ: ಹಿಂದೂ ಜಾಗರಣ ವೇದಿಕೆ ಕಾರ್ಕಳ ತಾಲೂಕು ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಪ್ರಯುಕ್ತ ಹಮ್ಮಿಕೊಂಡಿರುವ ಮೂರು ದಿನಗಳ ಅಷ್ಟಮಂಗಲ ಪ್ರಶ್ನಾಚಿಂತನೆ ಮತ್ತು ಜೀರ್ಣೋದ್ಧಾರ ಸಂಕಲ್ಪ ಸಭೆಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಚಾಲನೆ ನೀಡಲಾಯಿತು.

ಖ್ಯಾತ ದೈವಜ್ಞ ನಾರಾಯಣ ಪೊದುವಾಳ್ ಮತ್ತು ಹಿರಿಯ ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

ಕಾರ್ಕಳ ಶ್ರೀಕ್ಷೇತ್ರ ಪರ್ಪಲೆ ಗಿರಿಯ ಜತೆಗೆ ಕಾರ್ಕಳ ನಗರ ಮತ್ತು ಸುತ್ತಮುತ್ತಲಿನ ಇತಿಹಾಸ ಹಾಗೂ ವಿವಿಧ ದೈವ, ದೇವರುಗಳಿಗೆ ಸಂಬಂಧಿಸಿದ ಅನೇಕ ಮಹತ್ವದ ಸಂಗತಿಗಳನ್ನು ಪುನರುತ್ಥಾನಗೊಳಿಸುವ ಉದ್ದೇಶದಿಂದ ಈ ಅಷ್ಟಮಂಗಲ ಕಾರ್ಯವನ್ನು ನಡೆಸಲಾಗುತ್ತಿದೆ.

ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮೂಡಬಿದ್ರೆ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಹೊಸ್ಮಾರು ಗುರುಕುಲ ಆಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌, ಹಿಂ.ಜಾ.ವೇ. ಜಗದೀಶ್ ಕಾರಂತ, ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ.

ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಶ್ರೀಕೃಷ್ಣಗಿರಿ ಕಲ್ಕುಡ ದೈವಸ್ಥಾನದ ಟ್ರಸ್ಟ್ ಕಾರ್ಕಳ ಅಧ್ಯಕ್ಷ ಪ್ರಶಾಂತ್ ನಾಯಕ್, ಹಿಂದೂ ಜಾಗರಣ ವೇದಿಕೆ ಕಾರ್ಕಳ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ನಾರಾವಿ, ಮುಖಂಡರಾದ ದಿನೇಶ್ ಶೆಟ್ಟಿ ಹೆಬ್ರಿಘಿ, ಚಂದ್ರಶೇಖರ್ ಶೆಟ್ಟಿ, ಮಹೇಶ್‌ಬೈಲೂರು ಮೊದಲಾದವರು ಉಪಸ್ಥಿತರಿದ್ದರು.