ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಮಾಹಿತಿ

ಕಾರ್ಕಳ;  ಮತದಾನ ಎಲ್ಲರ ಹಕ್ಕು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತದಾನ ಅಗತ್ಯ ಭಾರತದಲ್ಲಿ ಯುವ ಶಕ್ತಿಯು ಹೇರಳವಾಗಿದೆ ಆದ್ದರಿಂದ ದೇಶದ ಸರ್ವತೋಮುಖ ಅಭಿವೃಧ್ಧಿ ಯುವ ಮತದಾರರ ಕೈಯಲ್ಲಿದೆ. ದೇಶದ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಬದಲಿಸುವ ಸಾಮರ್ಥ್ಯ ಯುವ ಜನತೆಯಲ್ಲಿದೆ ಆ ಸಾಮರ್ಥ್ಯವನ್ನು ದೇಶದ ಅಭಿವೃಧ್ಧಿಯಲ್ಲಿ ಬಳಸಿಕೊಳ್ಳಬೇಕು ಎಂದು ಉಡುಪಿಯ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಮತದಾನ ಸಾಕ್ಷರತಾ ಮಾಹಿತಿ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮತದಾನವು ಪ್ರಜಾಪ್ರಭುತ್ವದ ಮಾಪಕವಾಗಿದೆ. ಇದರಿಂದ ನಮ್ಮ ನೆಚ್ಚಿನ ನಾಯಕರನ್ನು ಆರಿಸುವ ಸ್ವಾತಂತ್ರ ನಮಗಿರುತ್ತದೆ. ಮೂಲಭೂತ ಹಕ್ಕುಗಳಂತೆ ಮತದಾನದ ಹಕ್ಕನ್ನು ಕೂಡ ನಾವು ಬಳಸಿಕೊಳ್ಳಬೇಕು. ಆದರೇ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ನಮಗೆ ನಷ್ಟ ಹೊರತು ಸರ್ಕಾರಕ್ಕಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ನಂತರ ಪೂರ್ಣ ನಾಗರೀಕತ್ವ ದೊರೆಯುವುದು. ಮತದಾನ ನಮ್ಮೆಲ್ಲರ ಹಕ್ಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ ಕೋಟ್ಯಾನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ದತ್ತಾತ್ರೇಯ ಮಾರ್ಪಳ್ಳಿ, ಕಾಲೇಜು ಚುನಾವಣಾ ಆಯೋಗದ ವಿದ್ಯಾರ್ಥಿ ರಾಯಭಾರಿಗಳಾದ ನವೀನ್ ಭಟ್ ಮತ್ತು ವರ್ಷ, ಅಧ್ಯಕ್ಷ ಮೊಹಮ್ಮದ್ ರಿಯಾಝ್, ಉಪಾಧ್ಯಕ್ಷ ಪ್ರದೀಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನೀಷಾ ಕಶ್ಯಪ್ ಪ್ರಾರ್ಥಿಸಿ, ಮೊಹಮ್ಮದ್ ರಿಯಾಝ್ ನಿರೂಪಿಸಿದರು.