ಕೇರಳದ ಕಣ್ಣೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಕೇರಳ ರಾಜ್ಯವು ದೇಶದಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ಖ್ಯಾತಿ ಪಡೆದುಕೊಂಡಿದೆ. ತಿರುವನಂತಪುರ, ಕೊಚ್ಚಿ, ಕೋಯಿಕ್ಕೋಡ್ ಬಳಿಕ ಇದೀಗ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಲೋಕಾರ್ಪಣೆಗೊಂಡಿದೆ.

ಭಾನುವಾರ ಮೊದಲ ವಿಮಾನ ಹಾರಾಟ ನಡೆಸುವ ಮೂಲಕ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದರು. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ಹಸಿರುನಿಶಾನೆ ತೋರಿಸಿದರು.

ರಾಜ್ಯದ ಕನಸಿನ ಯೋಜನೆಗೆ ಬೆಂಬಲ ನೀಡಿದ ಸುರೇಶ್ ಪ್ರಭು ಅವರಿಗೆ ಪಿಣರಾಯಿ ವಿಜಯನ್ ಧನ್ಯವಾದ ಹೇಳಿದರು. ಮಾಜಿ ಮುಖ್ಯಮಂತ್ರಿ ಇ.ಕೆ ನಾಯನಾರ್, ಉದ್ಯಮಿ ಕೃಷ್ಣನ್ ನಾಯರ್ ಅವರ ನೆರವನ್ನೂ ಸ್ಮರಿಸಿದರು.  ಕಾರ್ಯಕ್ರಮವನ್ನು ಪ್ರತಿಪಕ್ಷ ಯುಡಿಎಫ್ ಹಾಗೂ ಬಿಜೆಪಿ ಬಹಿಷ್ಕರಿಸಿದ್ದವು. ಮಾಜಿ ಮುಖ್ಯಮಂತ್ರಿ ಉ‌ಮ್ಮನ್ ಚಾಂಡಿ ಅವರಿಗೆ ಅಹ್ವಾನ ನೀಡದ್ದಕ್ಕೆ ಯುಡಿಎಫ್ ಮುನಿಸಿಕೊಂಡಿತ್ತು.

ದೇಶದಲ್ಲಿ ಒಂದು ವಿಮಾನ ನಿಲ್ದಾಣವನ್ನು ಹೇಗೆ ನಿರ್ಮಿಸಬೇಕು ಎಂಬುದಕ್ಕೆ ಕಣ್ಣೂರಿನ ನಿಲ್ದಾಣವು ಒಂದು ಮಾದರಿ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.